ಕನ್ನಡ ಶಬ್ದಗಳ ಭಂಡಾರ… ಇವರು ಸಾಧನಕೇರಿಯ ಸರದಾರ…!

ಕನ್ನಡ ಶಬ್ದಗಳ ಭಂಡಾರ… ಇವರು ಸಾಧನಕೇರಿಯ ಸರದಾರ…!

ಧಾರವಾಡದ ದಾರಿಯಲ್ಲೋಂದು ಕ್ಷಣ ನಡೆಯುತ್ತಿದ್ದರೆ ಅದೇನೋ ಒಂದು ತರಹದ ರೋಮಾಂಚನವಾಗುತ್ತದೆ. “ಉತ್ತರ ದ್ರುವದಿಂ ದಕ್ಷಿಣ ದ್ರುವಕು ಬೀಸುವ ಚುಂಬಕ ಗಾಳಿಗೆ” ಮನವೆಂಬುದು ತೇಲಿ ಹೋಗುತ್ತದೆ. “ಇನ್ನೂ ಯಾಕ ಬರ್ಲಿಲ್ಲವ ಹುಬ್ಬಳ್ಳಿಯವ ವಾರದಾಗ ಮೂರು ಸರತಿ ಬಂದು ಹೋಗಾಂವ” ಎಂದು ಕಣ್ಣರಳಿಸಿ ನೋಡಿದರೆ ಹಿಂದಿನಿಂದ ಯಾರೋ ಬಂದು “ನಾರಿ ನಿನ್ನ ಮಾರಿ ಮ್ಯಾಲ ನಗಿ ನವಿಲ ಆಡತಿತ್ತ ಆಡತಿತ್ತ ಓಡತಿತ್ತ ಮುಗಿಲ ಕಡಿಗಿ ನೋಡತಿತ್ತ” ಎಂದಂತೆ ಭಾಸವಾಗುತ್ತದೆ “ಹಕ್ಕಿ ಹಾರುತಿದೆ ನೋಡಿದಿರಾ” ಎಂದು ಕೇಳಿದರೆ “ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕಾ” ಎಂದು ನನಗೆ ಮರು ಪ್ರಶ್ನೆ ಹಾಕಿದ ಹಾಗೆ ಅನ್ನಿಸುತ್ತದೆ. “ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾ ಹೂಯ್ದಾ ನುಣ್ಣನೆ ಎರಕಾವಾ ಹೊಯ್ದಾ” ಎನ್ನುವ ಸಾಲು ನೆನಪು ಮಾಡಿಕೊಳ್ಳುತ್ತಿದ್ದರೆ, “ಅಂತರಂಗದಾ ಮೃದಂಗ ಅಂತು ತೋಂತನಾನಾ” ಎಂದು ಭಾವನೆಗಳನ್ನು ಮಾರ್ಧನಿಸುತ್ತದೆ. “ಯಾಕೊ ಕಾಣೆ ರುದ್ರವೀಣೆ ಮಿಡಿಯುತಿರುವುದು, ಜೀವದಾಣೆಯಂತೆ ತಾನೆ ನುಡಿಯುತಿರುವುದು” ಎಂದು ಮನಸೇ ವೀಣೆಯಾಗಿ ನುಡಿದು ಭಾವ ಸೂಸುತ್ತದೆ. ಬರುವ ತಣ್ಣನೆಯ ಗಾಳಿ ಮನಸ್ಸಿಗೆ ಮುದ ನೀಡಿದರೆ,  ಹರಿದು ಬರುವ ಪದ್ಯದ ಸಾಲುಗಳು ಕಚಗುಳಿ ಇಟ್ಟು ಕಾಡಿಸುತ್ತವೆ. ನಡೆಯುವ ದಾರಿ ಸವೆದದ್ದು ಮರೆತೇ ಹೋಗುತ್ತದೆ. ನೋಡುತ್ತಲೇ ಮನವೆಂಬುದು ನಂದನವನವಾಗಿ ಬದಲಾಗಿ ಬಿಡುತ್ತದೆ. ಎಲ್ಲಕ್ಕೂ ಮಿಗಿಲಾಗಿ ಆ ಮಲೆನಾಡಿನ ಮೊದಲದ್ವಾರದಲ್ಲಿ ನಿಂತುಕೊಂಡರೆ ಸಾಕು “ಬಾರೋ ಸಾಧನ ಕೇರಿಗೆ ಮರಳಿ ನಿನ್ನಿ ಊರಿಗೆ” ಎಂದು ಕಾವ್ಯ ಪ್ರೀಯರನ್ನು ಕೈ ಬೀಸಿ ಕರೆದಂತೆ ಭಾಸವಾಗುತ್ತದೆ. ಜಗದ ಜಂಜಡ ವೆಲ್ಲವನ್ನೆಲ್ಲ ಮರೆತು ಹೋದಂತೆ ಹೃದಯಯವೆಂಬ ವಿರಾಟ ವಿಣೆಯಲ್ಲಿನ “ನಾಕು ತಂತಿ” ಮಿಡಿಯುವ ಮೂಲಕ ಜಗತ್ತಿನ ಆಧ್ಯಾತ್ಮದ ನವಿರು ಸತ್ಯವನ್ನು ಅನಾವರಣ ಮಾಡುತ್ತ ಸಾಗಿ “ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು, ಬಳಸಿಕೊಂಡೆವದನೆ ನಾವು ಅದಕೊ ಇದಕೊ ಎದಕೊ” ಎನ್ನುವಂತ ತನ್ಮಯತೆಯ ಪ್ರೇಮನಾದ ಹೊರ ಹೊಮ್ಮಿಸಿ “ರಸವೇ ಜನನ ವಿರಸವೇ ಮರಣ” ಎನ್ನುವ ಅರಿವು ಮೂಡಿಸುತ್ತದೆ. ಹೀಗೆ ಎಲ್ಲವನ್ನು ಮೆಲಕು ಹಾಕಿಕೊಳ್ಳುವ ವೇಳೆಯಲ್ಲಿ ಅಂತಿಮವಾಗಿ ಇದೆಲ್ಲವನ್ನು ಅರ್ಥೈಸಿದ ಆ ಕವಿ ಎದುರಿಗೆ ಕೈ ಮುಗಿದು ನಿಲ್ಲುವಂತೆ ಮಾಡಿ ಬಿಡುತ್ತದೆ.

ಧಾರವಾಡದ ದಾರಿಯಲ್ಲಿ ನಡೆವಾಗ ಈ ರೀತಿಯ ರೋಮಾಂಚನಕ್ಕೆ ಕಾರಣವಾದವರೆಂದರೆ ಅದು ಕನ್ನಡ ಸಾರಸ್ವತ ಲೋಕದ ಸರದಾರ ನಾಗಿ, ಸಾಹಿತ್ಯ ಲೋಕದ ಶಬ್ದ ಗಾರುಡಿಗನಾಗಿ, ಪದಕೋಶಕ್ಕೂ ಮೀರಿದ ಪದವಾಗಿ, ನಾಡು ಕಂಡ ಮಹಾನ್ ಕವಿಯಾಗಿ, ಸಾಧನ ಕೇರಿಯ ನೆಲದಲ್ಲಿ ಸಾಹಿತ್ಯ ಸಾಧನೆ ಮಾಡಿದ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು. ಅಂಬಿಕಾ ತನಯದತ್ತ ಎನ್ನುವ ಕಾವ್ಯ ನಾಮದೊಂದಿಗೆ ಗುರುತಿಸಿಕೊಂಡ ಇವರು ಕನ್ನಡ ನಾಡು ಕಂಡ ಮೇರು ವ್ಯಕ್ತಿತ್ವದ ಮಹಾನ್ ಸಾಹಿತಿ ಹಾಗೂ ಕವಿಯಾಗಿದ್ದಾರೆ. ತಮ್ಮ ಪದಲಾಲಿತ್ಯದಿಂದಲೇ ಸಾಹಿತ್ಯ ಲೋಕದ ಸಿರಿಯನ್ನು ಹೆಚ್ಚಿಸಿದ ಇವರು ಕನ್ನಡ ಸಾರಸ್ವತ ಲೋಕಕ್ಕೆ ಎಂದೆಂದು ಸಾವಿರದ ಸಾಹಿತ್ಯ ವನ್ನು ನೀಡಿ ಕನ್ನಡಿಗರ ಮನದಾಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ವiತೃಭಾಷೆ ಮರಾಠಿಯಾದರೂ ಆ ಭಾವನೆಯ ಗಡಿಯನ್ನು ಮೀರಿ ಕನ್ನಡ ಭಾಷೆಯಲ್ಲಿ ಪ್ರಭುತ್ವ ಮೆರೆದು ಅಂದಾಭಿಮಾನಕ್ಕಿಂತ ಅಧಮ್ಯ ಅಭಿಮಾನ ಮುಖ್ಯ ಎಂದು ಎತ್ತಿ ತೋರಿಸಿದ್ದಾರೆ. ಅದಕ್ಕೆ ಸಾಕ್ಷಿ ಅವರು ಕನ್ನಡಕ್ಕೆ ನೀಡಿದ ಮೇರು ಕೃತಿಗಳು. “ಕೃಷ್ಣಕುಮಾರಿ”ಯಿಂದ ಆರಂಭವಾಗಿ “ಪ್ರತಿಬಿಂಬಗಳ”ವರಗಿನ ಕವನ ಸಂಕಲನ ಗಳು ಸೇರಿದಂತೆ ಹಲವಾರು ಉಚ್ಚ ಮಟ್ಟದ ಕೃತಿಗಳು ಅವರ ಭಾವನೆಗಳ ಅಲೆಯಲ್ಲಿ ತೇಲಿಬಂದು ಕನ್ನಡಿಗರ ಮನದಲ್ಲಿ ನೆಲೆನಿಲ್ಲುವಲ್ಲಿ ಯಶಸ್ವಿಯಾಗಿವೆ. ಹೀಗೆ ಕನ್ನಡ ಭಾಷೆಯನ್ನೆ ಉಸಿರಾಡಿದ ಬೇಂದ್ರೆಯರು ಕನ್ನಡ ಸಾಹಿತ್ಯ ಲೋಕದ ದಂತಕಥೆಯಾಗಿ ಹೋಗಿದ್ದಾರೆ.

ಇವರಿಗೆ ಕನ್ನಡ ಭಾಷೆ ಎಂದರೆ ಅದಮ್ಯವಾದ ಪ್ರೀತಿ. ಹೆತ್ತ ತಾಯಿಯನ್ನು ಬಿಟ್ಟರೆ ಅತೀ ಹೆಚ್ಚು ಅವರು ಪ್ರೀತಿಸಿದ್ದು ಈ ಭಾಷೆಯನ್ನು. ಅದಕ್ಕೆ ಅವರಿಗೆ ಯಾರಾದರೂ “ನೀವು ಕನ್ನಡ ಭಾಷೆಯಲ್ಲಿ ಬಹಳ ಚಲೋ ಪದ್ಯ ಬರಿತಿರಿ” ಎಂದು ಹೇಳಿದರೆ ಮರುಕ್ಷಣವೇ “ಅಲ್ಲೋ ತಮ್ಮ ನಾನ ಕನ್ನಡ ಭಾಷೆಯೊಳಗ ಚಲೋ ಪದ್ಯಾ ಬರಿಯಂಗಿಲ್ಲ, ಬದಲಿಗಿ ಪದ್ಯ ಬರಿಲಿಕ್ಕ ಕನ್ನಡ ಭಾಷೆನಾ ಚಲೋ ಐತಿ” ಎಂದು ಹೇಳುವ ಮೂಲಕ ಕನ್ನಡ ಭಾಷೆಯ ಮೇಲಿನ ತಮ್ಮ ಅದಮ್ಯ ಪ್ರೇಮವನ್ನು ಎತ್ತಿ ತೋರಿಸುತ್ತಿದ್ದರು. ಕನ್ನಡ ಭಾಷೆಯ ಪದಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಬೇಂದ್ರೆಯವರಿಗೆ ಕನ್ನಡ ಶಬ್ದಗಳ ಮೇಲೆ ಎಲ್ಲಿಲ್ಲದ ಹಿಡಿತವಿತ್ತು. ಕಲವೊಮ್ಮೇ ಅವರು ಹೇಳುವ ಮಾತಗಳು ಕೇಳುವಾಗ ಸರಳವೆನಿಸಿದರೂ ಕೇಳುಗನಿಗೆ ಅದನ್ನು ಅರಗಿಸಿಕೊಳ್ಳುವುದು ಕಷ್ಟವಾಗಿ ಒದ್ದಾಡುತ್ತಿದ್ದರು. ಒಂದು ಬಾರಿ ಯಾರೊ ಬಂದು “ಶಾಶ್ವತವಾಗಿ ಹೆಸರು ಮಾಡಬೇಕು ಮತ್ತು ಸದಾ ನೆನಪಲ್ಲಿ ಉಳಿಯುಂತಾಗಬೇಕಾದರೆ ಎಷ್ಟು ಕವನಗಳನ್ನು ಬರಿಯಬೇಕು?” ಎಂದು ಪ್ರಶ್ನೆ ಮಾಡಿದಾಗ “ಸಾರಿದಾ ಒಂದು ಪದ್ಯ ಬರಿಬೇಕು” ಎಂದು ಉತ್ತರ ನೀಡಿದರು. ಅದನ್ನು ಕೇಳಿದ ಅಲ್ಲಿದ್ದವರೆಲ್ಲ ಅದಕ್ಕೆ ಸಿದ್ಧರಾದರೂ, ಆದರೆ ತಮ್ಮ ಮಾತಿನ ಮರ್ಮವನ್ನು ಬೇಂದ್ರೆಯವರು ಬಿಡಿಸಿದಾಗ ಇದ್ದವರೆಲ್ಲ ಧಂಗಾಗಿ ಹೋದರು. “ಸಾವಿರದಾ ಒಂದು ಎಂದಕ್ಷಣ ಅಂಕಿ ಲೆಕ್ಕ ಹಾಕುವುದಲ್ಲ. ನಾನು ಹೇಳಿದ್ದು ಒಂದೇ ಕವನ ಅದು ಸಾವು ಇರದ ಒಂದು ಕವನ” ಎನ್ನುವ ಮೂಲಕ ಕನ್ನಡ ಪದದ ಶಬ್ದ ಕುಸುಮದ ಕಂಪನ್ನು ಹಾಗೂ ಎಲ್ಲಿಯೂ ಸಿಗದ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತಾರೆ. ಹೀಗೆ ಕನ್ನಡ ಭಾಷೆಯ ಮೇಲಿನ ಅದಮ್ಯ ಪ್ರೀತಿ ಹಾಗೂ ತಮ್ಮ ಸಾಹಿತ್ಯದ ಮೇಲಿನ ಅಖಂಡ ವಿಶ್ವಾಸ ಇಂದು ಅವರನ್ನು ನಮ್ಮ ಮಾನದಾಳದ ಮಹಾನ್ ಕವಿಯಾಗಿ ಉಳಿಸಿದೆ. ಸೊಲ್ಲಾಪುರದ ದಯಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅವರು ಕಾಲೇಜಿಗೆ ಬರದೇ ಇದ್ದರೆ ಹಾಜರಾತಿ ಪುಸ್ತಕವನ್ನು ಅವರ ಮನೆಗೆ ಕಳುಹಿಸಿ ಋಜು ಮಾಡಿಸಿಕೊಂಡು ಬರುತ್ತಿದ್ದರು. ಇದರಿಂದ ಕೋಪಗೊಂಡ ಸಹಹೋದ್ಯೋಗಿಯೊಬ್ಬರು ಪ್ರಾಂಶುಪಾಲರಿಗೆ ಇದನ್ನು ಪ್ರಶ್ನಿಸಿದಾಗ “ಬೇಂದ್ರೇ ಎಂದರೆ ಕೇವಲ ದಯಾನಂದ ಕಾಲೇಜಿನ ಸ್ವತ್ತಲ್ಲ. ಅವರು ಸಾಹಿತ್ಯ ಲೋಕದ ಸ್ವತ್ತು ಹೀಗಾಗಿ ಅವರು ಎಲ್ಲಿದ್ದರು ನಮ್ಮಲ್ಲೇ ಇದ್ದಂತೆ” ಎನ್ನುವ ಮಾತು ಹೇಳುವುದನ್ನು ಕೇಳಿದಾಗ ಅವರ ಸಾಹಿತ್ಯ ಸಾಧನೆಯ ಅರಿವು ನಮಗಾಗುತ್ತದೆ. ಮತ್ತು ತಮ್ಮ ವ್ಯಕ್ತಿತ್ವದ ಪ್ರಭಾವವನ್ನು ಯಾವಪರಿಯಲ್ಲಿ ಚಾಚುತ್ತಿದ್ದರು ಎನ್ನುವುದು ಅರಿವಾಗುತ್ತದೆ. ಇದರಿಂದಾಗಿಯೇ ಇವರು ಸಾಹಿತ್ಯ ಕ್ಷೇತ್ರದ ಮೇರು ಪರ್ವತವಾಗಿ ಮರೆದವರು ದ.ರಾ.ಬೇಂದ್ರೆಯವರು.

1918 ರಲ್ಲಿ ಪ್ರಭಾತ ಪತ್ರಿಕೆಯಲ್ಲಿ ಮೊದಲಬಾರಿಗೆ ಇವರ ಕವಿತೆ ಪ್ರಕಟವಾಗಿ ನಂತರ ಸಾಹಿತ್ಯ ಲೋಕದ ಹೆಮ್ಮರವಾಗಿ ಬೆಳೆಯಲು ಕಾರಣವಾಯಿತು. ಇವರ “ಕಾವ್ಯ ವೈಖರಿ” ಹೇಗಿತ್ತೆಂದರೆ “ತಾ ಲೆಕ್ಕಣಿಕಿ ತಾ ದೌತಿ” ಎಂದು ಬರೆಯಲು ಮುಂದಾದರೆ ಇವರ ಸಾಹಿತ್ಯಲ್ಲಿ ಮೂಡಿದ “ಗರಿ” “ಕೃಷ್ಣಕುಮಾರಿ”ಗೂ ಇಷ್ಟವಾಗಿ “ಸೂರ್ಯಪಾನ”ದ ಸಾಲಿನಲ್ಲಿ ನಿಂತು “ಮುಕ್ತಕಂಠ” ದಿಂದ “ಸಖೀಗೀತ”ಹಾಡಿದಾಗ “ಮುಗಿಲ ಮಲ್ಲಿಗೆ” ಅರಳಿ ಕಂಪು ಹರಿಸಿತ್ತು. ಇದನ್ನು ಕಂಡು “ಹೃದಯ ಸಮುದ್ರ” ಉಕ್ಕಿ ಹರಿದು “ಜೀವ ಲಹರಿ”ಯಲ್ಲಿ ಲೀನ ವಾಗಿತ್ತು. “ಮೇಘಧೂತ” ಹೊತ್ತು ತಂದ ವೀಣೆಯಿಂದ “ನಾಕುತಂತಿ” ಮಿಡಿದು “ನಾದಲೀಲೆ”ಯೇ ಸೃಷ್ಠಿಯಾಗಿಬಿಟ್ಟಿತ್ತು. ಅದನ್ನು ಕೇಳುತ್ತ “ಉಯ್ಯಾಲೆ” ಜೀಕುತ್ತಿದ್ದರೆ “ಒಲವೇ ನಮ್ಮ ಬದುಕು” ಎನ್ನುವ ಭಾವ ತುಂಬಿ “ಶ್ರೀ ಮಾತೆ”ಯ “ಚೈತನ್ಯದ ಪೂಜೆ”ಗೆ “ವಿನಯ”ದಿಂದ “ನಮನ” ಸಲ್ಲಿಸಿ “ಉತ್ತರಾಯಣದಲ್ಲಿ” ಹುದುಗಿ ಹೋಗಿ “ಮತ್ತೇ ಶ್ರಾವಣ” ಬಂದಾಗ “ಹಾಡು ಪಾಡಾ”ಗಿ ಹರಿದು ಬಂದು ಕಾವ್ಯ ರಸಿಕರ ಮನ ಸೇರುತ್ತಿತ್ತು. ಅಂಥಹ ಅದ್ಭುತ ಕಲಾಕುಸಿರಿಯ ಕಲೆಗಾರ ಎಂದರೆ ಅದು ಅಂಬಿಕಾ ತನಯದತ್ತರು.

ಮಗನ ಸಾವಲ್ಲೂ ಸಹ ದೃತಿ ಗೆಡದೆ “ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ, ಹುಣ್ಣಿವಿ ಚಂದಿರನ ಹೆಣಾ ಬಂತು ಮುಗಿಲಾಗ ತೇಲುತ ಹಗಲ”ಎಂದು ಕವಿತೆ ರಚಿಸುವ ಅವರನ್ನು ಕಂಡರೆ ಅವರಿಗೆ ಸಾಹಿತ್ಯದ ಮೇಲಿದ್ದ ಶ್ರದ್ಧೇ ಕವಿತೆಯ ಮೇಲಿದ್ದ ಕಾಳಜಿ ಅರಿವಾಗುತ್ತದೆ. ಹಲವು ವರ್ಷಗಳ ಹೋರಾಟದ ಫಲವಾಗಿ ಕರ್ನಾಟಕದ ಏಕಿಕರಣವಾದ ಖುಷಿಯಲ್ಲಿ ಹುಯಿಲಗೋಳ ನಾರಾಯಣ ರಾಯರು ಬರೆದಿದ್ದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎನ್ನುವ ಗೀತೆಯನ್ನು ಗಾಯಕ ಬಿ.ಕಾಳಿಂಗರಾಯರು “ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು” ಎಂದು ಹಾಡಿದಾಗ ಕಾಳಿಂಗರಾಯರನ್ನು ಹತ್ತಿರ ಕರೆದು “ನೋಡು ಕಾಳಿಂಗರಾಯ ಉದಯವಾಯಿತು ಎಂದು ಹಾಡಬೇಡ. ಕಾರಣ ಪ್ರತಿ ಉದಯಕ್ಕು ಒಂದು ಅಸ್ತ ಇದ್ದೇ ಇರುತ್ತದೆ. ಆದರೆ ಕನ್ನಡಕ್ಕೆ ಬರೀ ಉದಯ ಮಾತ್ರವಿದೆ ಹೊರತು ಅಸ್ತ ಇಲ್ಲ. ಆ ನಿಟ್ಟಿನಲ್ಲಿ ನೀನು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದೇ ಹಾಡು” ಎಂದು ಹೇಳಿದ್ದನ್ನು ಕೇಳಿದರೆ ಕನ್ನಡ ಭಾಷೆಯ ಮೇಲಿನ ಅವರ ಗೌರವ, ಪ್ರೀತಿ, ಅಭಿಮಾನ ನಮ್ಮಲ್ಲೂ ಯಾಕಿರಬಾರದಾಗಿತ್ತು ಎನ್ನುವ ಭಾವನೆ ಹುಟ್ಟು ಹಾಕುತ್ತದೆ. ಕೇವಲ ಭಾಷೆ ಹಾಗೂ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದ ಬೇಂದ್ರೆಯವರು ತಮ್ಮ ಬರವಣಿಗೆಯನ್ನು ಪ್ರತಿಭಟನೆಯ ಅಸ್ತ್ರವಾಗಿಯೂ ಸಹ ಬಳಸಿಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಬರೆದ “ನರಬಲಿ” ಕವಿತೆ ಅದು ಯಾವ ಪರಿ ಬ್ರಿಟೀಷರನ್ನು ಉರಿಸಿತು ಎಂದರೆ ಆ ಕವನಕ್ಕಾಗಿ ಕಾರಾಗೃಹ ದರ್ಶನವನ್ನೇ ಪಡೆಯಬೇಕಾಯಿತು. “ದೇವರದೊಂದು ಗೋರಿಯ ಕಟ್ಟಿ, ಧರ್ಮದ ಧೂಪಕೆ ಬೆಂಕಿಯನಿಕ್ಕಿ, ಗಣಗಣ ಬಾರಿಸಿ ಪ್ರಾಣದ ಘಂಟೆಯ, ಸಾವಿನ ನೋವಿಗೆ ಕಲಮಲವೆದ್ದು, ನೆಲವನ್ನೆಲ್ಲ ತುತ್ತುವೆನೆಂದು, ಗದರುತ್ತಿಹುದು ಘರ್ಜಿಸುತಿಹುದು, ಬಡವರ ಬಗ್ಗರ ತುತ್ತಿನ ಚೀಲದ ಒಳಗಿನ ಒಳಗಿನ ಒಳಧ್ವನಿಯೊಂದು” ಎನ್ನುವ ಕವಿತೆಯನ್ನು ಓದುತ್ತಿದ್ದರೆ ಅವರಿಲ್ಲಿನ ಮಾನವೀಯ ಮೌಲ್ಯಗಳು ಪ್ರತಿಭಟನೆಯ ರೂಪ ಪಡೆದು ಇಂತ ಕವಿತೆಯಾಗಿ ಹೊರ ಬಂದಿವೆ ಎನ್ನುವುದು ಸ್ಪಷ್ಟವಾಗುತ್ತದೆ.

ತಮ್ಮ ನಿಷ್ಟೂರ ಹಾಗೂ ನಿರ್ಭಿಡೆ ಮಾತುಗಳು ಹಾಗೂ ಬರಹಗಳಿಂದಲೇ ಗುರುತಿಸಿಕೊಂಡ  ದ.ರಾ.ಬೇಂದ್ರೆಯವರು ಕನ್ನಡಕ್ಕೆ ಒಂದು ಜ್ಞಾನಪೀಠವನ್ನು ತಂದುಕೊಡುವಲ್ಲಿ ಯಶಸ್ವಿಯಾದರು. “ಕುಣಿಯೋಣು ಬಾರಾ ಕೂಣಿಯೋಣು ಬಾ, ತಾಳ್ಯಾಕ ತಂತ್ಯಾಕ ರಾಗದ ಚಿಂತ್ಯಾಕ, ಹೆಜ್ಯಾಕ ಗೆಜ್ಯಾಕ ಕುಣಿಯೋಣು ಬಾರಾ ಕುಣಿಯೋಣು ಬಾ” ಎಂದು ಸಂತಸದಿಂದ ಹಾಡುತ್ತಲೇ “ಇಳಿದು ಬಾ ತಾಯೆ ಇಳಿದು ಬಾ ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ, ದೇವ ದೇವರನು ತಣಿಸಿ ಬಾ, ದಿಗ್ದಿಗಂತದಲಿ ಹಣಿಸಿ ಬಾ” ಎನ್ನುವ ಕವಿತೆಯಲ್ಲಿ ಪುರಾಣವನ್ನೇ ಕಾವ್ಯದಲ್ಲಿ ತೋರಿಸಿದ್ದಾರೆ. ಹೀಗೆ ಕಲ್ಪನೆಯಿಂದ ವಾಸ್ತವದ ವರೆಗೂ, ಆನಂದದಿಂದ ಆಧ್ಯಾತ್ಮದ ವರೆಗೂ, ಅನಂತದಿಂದ ಅಖಂಡತೆವರೆಗೂ, ಪ್ರೀತಿಯಿಂದ ಪ್ರತಿಭಟನೆಯವರೆಗೂ ಎಲ್ಲ ಬಗೆಯ ಕವಿತೆಗಳನ್ನು ನೀಡಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ರಂಗುಗೊಳಿಸಿದ ವರಕವಿಯ ಕವಿತೆಗಳನ್ನು ಓದುತ್ತಿರುವ ನಾವೇ ಧನ್ಯ. ಅವರು ನಮ್ಮ ನಾಡಿನಲ್ಲಿದ್ದರಲ್ಲ ಅದೇ ಹೆಮ್ಮೆ ಎನ್ನುವ ಮಾತೇ ಮಾನ್ಯ.

— ಮಂಜುನಾಥ ಮ ಜುನಗೊಂಡ 
ಮುಖ್ಯಸ್ಥರು : ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ದರಬಾರ ಪದವಿ ಮಹಾವಿದ್ಯಾಲಯ, ವಿಜಯಪುರ