ಬೆಳ್ಳಿ ತೆರೆಗೆ ಬರಲಿದ್ದಾನೆ ಮತ್ತೊಬ್ಬ 'ಜಟ್ಟಿ’

ಬೆಳ್ಳಿ ತೆರೆಗೆ ಬರಲಿದ್ದಾನೆ ಮತ್ತೊಬ್ಬ 'ಜಟ್ಟಿ’

ವಿಜಯಪುರ : ಕುಸ್ತಿ ಹಿನ್ನೆಲೆಯುಳ್ಳ ಹಲವು ಚಿತ್ರಗಳು ಬೆಳ್ಳಿ ಪರದೆಯ ಮೇಲೆ ರಾರಾಜಿಸಿವೆ. ಇದೀಗ ಈ ಸಾಲಿಗೆ‌ ನಂದಿ ಬಸವೇಶ್ವರ ಪ್ರೊಡಕ್ಷನ್ ಹೌಸ್‌ನ ’ಜಟ್ಟಿ’ ಚಿತ್ರ ಸೇರಲಿದೆ.

ನಲವತ್ತು ವರ್ಷಗಳ ಹಿಂದೆ ವಿಜಯಪುರದ ನೆಲದಲ್ಲಿ 'ಲಾಲ್ಯಾ’ ಎಂಬ ಜಟ್ಟಿಯ ಜೀವನದಲ್ಲಿ ನಡೆದ ನೈಜ ಘಟನೆ ಆಧರಿಸಿ ಬರೆದ ಕಾದಂಬರಿ ಆಧಾರಿತ ಚಿತ್ರ ಜಟ್ಟಿಯ ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ. ಇಂದಿನಿಂದ ಸುಮಾರು ಇಪ್ಪತ್ತು ದಿನಗಳ ಕಾಲ ವಿಜಯಪುರ ಜಿಲ್ಲೆಯ ವಿಶೇಷ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ನಂತರ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿತ್ರೀಕರಣ ಮುಂದುವರೆಯಲಿದೆ.

ಕುಸ್ತಿ ಪಂದ್ಯಕ್ಕೆ ಈ ಹಿಂದೆ ಇದ್ದಷ್ಟು ಪ್ರೋತ್ಸಾಹ ಈಗಿಲ್ಲ. ದಸರಾ ಮತ್ತಿತರ ಉತ್ಸವಗಳಲ್ಲಷ್ಟೇ ಇದೆ. ಹೀಗಾಗಿ ಮತ್ತೆ ನಾಡಿನ ಸೊಗಡಿನ ಪಂದ್ಯದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಹಿರಿಮೆ, ಗರಿಮೆಯನ್ನು ತೆರೆಯ ಮೇಲೆ ತರುವ ನಿಟ್ಟಿನಲ್ಲಿ ಈ ಚಿತ್ರ ನಿರ್ಮಿಸುವ ನಿರ್ಧಾರಕ್ಕೆ ಬರಲಾಗಿದೆ. ಜಟ್ಟಿ ಹಾಗೂ ಸಮಾಜದ ನಡುವಿನ ಸಂಘರ್ಷ, ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂದರೂ, ಅದನ್ನು ಆತ ಮೆಟ್ಟಿ ನಿಲ್ಲುವ ಪರಿ ಚಿತ್ರದಲ್ಲಿ ಮೂಡಿ ಬಂದಿದೆ.

ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಮಣ್ಣಿನ 'ಕುಸ್ತಿ ಹಬ್ಬ’ವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಜಟ್ಟಿಯ ಪಾತ್ರಕ್ಕೆ ಬೇಕಾದ ದೇಹದಾರ್ಢ್ಯ ತರಬೇತಿಯನ್ನು ಎರಡು ತಿಂಗಳ ಕಾಲ ಪಡೆಯಲಾಗಿದೆ. ಫೈಟಿಂಗ್ ದೃಶ್ಯಗಳಲ್ಲಿ ನೈಜತೆಗೆ ಒತ್ತು ನೀಡಿದ್ದು ನಿಜವಾದ ಫೈಲ್ವಾನ್ ಗಳಿಂದಲೇ ಪಟ್ಟುಗಳನ್ನು ಹಾಕಿಸಲಾಗಿದೆ.

ಕುರಿ ಕಾಯುವ ಹಳ್ಳಿ ಹೆಣ್ಣಿನ ಪಾತ್ರವಾದರೂ ಗ್ಲಾಮರಸ್ ಆಗಿ ನಟಿ ಶ್ರೇಯಾ ಕಾಣಿಸಿಕೊಂಡಿದ್ದಾರೆ. ಬಿ.ಕೆ. ಪಾಟೀಲ್ ಅವರ ಕಥೆಗೆ ಎಂ.ಆರ್. ಪಾಟೀಲ್ (ಬಳ್ಳೋಳಿ) ಬಂಡವಾಳ ಹೂಡಿರುವ ಜಟ್ಟಿ ಚಿತ್ರದ ತಾರಾಗಣದಲ್ಲಿ ವಿಲಾಸ್ ಪಾಟೀಲ್, ರಕ್ಷಾ, ಗುರುಪ್ರಸಾದ್, ಆಂಜನಪ್ಪ, ಬಿ. ರಾಮಮೂರ್ತಿ ಮೊದಲಾದವರಿದ್ದಾರೆ. ಬಾಲನಟರಾಗಿ ಸರ್ವಜ್ಞ, ಅದಿತಿ ಅಭಿನಯವಿದೆ. ಪ್ರವೀಣ್ ಡಿ. ರಾವ್ ಸಂಗೀತವಿದೆ. ’ಜಟ್ಟಿ’ ಎಷ್ಟರಮಟ್ಟಿಗೆ ಪ್ರೇಕ್ಷಕರ ಮನದಲ್ಲಿ ಗಟ್ಟಿಯಾಗಿ ನೆಲೆಯೂರಲಿದೆ, ಗಲ್ಲಾಪಟ್ಟಿಗೆಯಲ್ಲಿ ಎಷ್ಟು ಸದ್ದು ಮಾಡಲಿದೆ ಎಂಬುದು ಚಿತ್ರೀಕರಣ ಮುಗಿದು, ತೆರೆಕಂಡ ಬಳಿಕವಷ್ಟೇ ತಿಳಿಯಲಿದೆ.