ಕ್ರಿಶ್ಚಿಯನ್ ಆದ್ರು ಬಸವಾದಿ ಶರಣರ ಬಗ್ಗೆ ಒಲವು‌ ಹೊಂದಿದ್ದರು ಜಾರ್ಜ್‌ ಫರ್ನಾಂಡೀಸ್

ಕ್ರಿಶ್ಚಿಯನ್ ಆದ್ರು ಬಸವಾದಿ ಶರಣರ ಬಗ್ಗೆ ಒಲವು‌ ಹೊಂದಿದ್ದರು ಜಾರ್ಜ್‌ ಫರ್ನಾಂಡೀಸ್

ಮಂಗಳೂರು ತೊರೆದು ಉದ್ಯೋಗಕ್ಕಾಗಿ ದೂರದ ಮುಂಬೈ ಸೇರಿದ ಯುವಕ ಚೌಪಾಟಿ ರಸ್ತೆ ಬದಿಗಳಲ್ಲಿ ಮಲಗುತ್ತಿದ್ದರು. ರಾತ್ರಿ ಬರುವ ಬೀಟ್ ಪೊಲೀಸರು ಬಡಿದೆಚ್ಚರಿಸಿದ ನಂತರ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ ಈ ವ್ಯಕ್ತಿ ಭಾರತದ ಅತ್ಯುನ್ನತ ರಕ್ಷಣಾ ಸಚಿವ ಸ್ಥಾನದವರೆಗೆ ಬೆಳೆದು ಬಂದಿರುವದು ರೋಚಕ ಇತಿಹಾಸ.

ಸ್ವದೇಶಿ ಜಾಗರಣ ಮಂಚನ ರಾಜೀವ್ ದೀಕ್ಷಿತ್ ಅವರಿಗೆ ಬಹಳ ಹಿಂದೆ ಸೋಲ್ಲಾಪುರದಲ್ಲಿ ನಡೆದ ಸಂವಾದದಲ್ಲಿ ನೀವು ಇಷ್ಟು ಪ್ರತಿಭಾ ಶಾಲಿಗಳಿದ್ದೀರಿ, “ನೂರಾರು ಕನಸುಗಳಿವೆ ಇದು ನನಸಾಗಲು ರಾಜಕೀಯ ಅಧಿಕಾರದಿಂದ ಮಾತ್ರ ಸಾಧ್ಯ, ಹೀಗಿದ್ದಾಗ ನೀವೇಕೆ ರಾಜಕೀಯ ಸೇರಿಲ್ಲ” ಎಂದು ನಾನು ಪ್ರಶ್ನಿಸಿದ್ದೆ. ಆಗ ಅವರು “ನಾನು ರಾಜಕೀಯ ಸೇರಿ ಜಾರ್ಜ್ ಫರ್ನಾಂಡಿಸ್‍ರಂತೆ ನನ್ನ ತೆಜೋಮಯ ವ್ಯಕ್ತಿತ್ವಕ್ಕೆ ಮಂಕು ತರುವದಿಲ್ಲ. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಟ್ರೇಡ್ ಯೂನಿಯನ್ ನಾಯಕರಾಗಿದ್ದ ಜಾರ್ಜ್ ಒಂದು ಸಣ್ಣ ಕರೆ ನೀಡಿದರೂ ಸಾಕು ಮರು ದಿನ ಮುಂಬೈ ಮಹಾನಗರ ಸ್ಥಬ್ದಗೊಳ್ಳುತ್ತಿತ್ತು. ಅದು ಅಂದಿನ ಜಾರ್ಜ್ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿತ್ತು. ಅಂದು ಅವರ ಧ್ವನಿಯಲ್ಲಿ ಆ ಬಲವಿತ್ತು. ಲಕ್ಷಾಂತರ ಕಾರ್ಮಿಕರ ಒಲವಿತ್ತು. ಆದರೆ ಅದೇ ಜಾರ್ಜ್ ಇಂದು ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿದ್ದಾರೆ. ಇಂದು ಇವರ ಕರೆಗೂ ಮುಂಬೈ ನಗರ ಅಲಗುವುದಿಲ್ಲ. ರಾಜಕೀಯ ಅಧಿಕಾರ ವ್ಯಕ್ತಿಯ ಅಂತರಂಗದ ತೇಜಸ್ಸನ್ನು ಮಂಕು ಮಾಡುತ್ತದೆ. ರಕ್ಷಣಾ ಖಾತೆಯ ಪರಮಾಧಿಕಾರವಿದ್ದರೂ ಜಾರ್ಜ್ ಅಂದಿನ ಕಾರ್ಮಿಕ ನಾಯಕನಾಗಿದ್ದಾಗಿನ ಬಲ ಮತ್ತು ತೇಜಸ್ಸು ಇಲ್ಲ” ಎಂದಿದ್ದರು ರಾಜೀವ್ ದೀಕ್ಷಿತ್.

ಕ್ಯಾಥೋಲಿಕ್ ಕ್ರಿಶ್ಚಿಯನ್ನರಾಗಿದ್ದ ಸಮಾಜವಾದಿ ಜಾರ್ಜ್, ಬಸವಾದಿ ಶರಣರ ಆದರ್ಶಗಳ ಕುರಿತು ಅಪಾರ ಒಲವು ಬೆಳೆಸಿಕೊಂಡಿದ್ದರು. ಆ ಕಾರಣಕ್ಕಾಗಿಯೇ 2005ರಲ್ಲಿ ದೂರದ ದೆಹಲಿಯಿಂದ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಎಂಬ ಗ್ರಾಮಕ್ಕೆ ಭೇಟಿ ನೀಡಿ, ಬಸವಣ್ಣನ ಜನ್ಮ ಸ್ಥಾನದಲ್ಲಿ ಅವರ ನೆನಪಿನ ವಚನ ಶಿಲಾಮಂಟಪಕ್ಕೆ ಅಡಿಗಲ್ಲು ಹಾಕಿದ್ದರು.

ಬಸವಣ್ಣನ ಹುಟ್ಟೂರು ಎಂಬ ಕಾರಣಕ್ಕೆ ಭಾರಿ ನೀರಿಕ್ಷೆಯಿಂದ ಬಂದಿದ್ದ ಅವರಿಗೆ ಅಲ್ಲಿನ ಅವ್ಯವಸ್ಥೆ, ರಸ್ತೆ ಮೇಲಿನ ಕೊಳಕು ಗಲೀಜು ನೋಡಿದವರೇ ಆಯೋಜಕರ ಮೇಲೆ ಸಿಟ್ಟಾಗಿ, ಏನು? ಬಸವಣ್ಣನ ಊರಿನಲ್ಲಿ ಇಷ್ಟು ಕಸವೇ? ಎಂದು ತಾವೇ ಕಸಬರಿಗೆ ಹಿಡಿದು ಗುಡಿಸಲು ನಿಂತರು. ಇದು ಮಾರನೇಯ ದಿನದ ಪತ್ರಿಕೆಯಲ್ಲಿ ಸುದ್ದಿಯಾಗಿತ್ತು. ಫೈಜಾಮ, ಇಸ್ತ್ರಿ ಇಲ್ಲದ ನೆಹರು ಶರ್ಟ್‍ದೊಂದಿಗೆ ತಮ್ಮ ಕಂಚಿನ ಕಂಠದಿಂದ ಜಾರ್ಜ್ ಭಾಷಣಕ್ಕೆ ನಿಂತರೆ, ಕನ್ನಡ, ತುಳು, ಕೊಂಕಣಿ, ಮರಾಠಿ, ಹಿಂದಿ, ಉರ್ದು, ಬಿಹಾರಿ, ಇಂಗ್ಲೀಷ ಸೇರಿದಂತೆ ಹಲವು ಭಾಷೆ ಮಾತನಾಡಬಲ್ಲರು.

ವೈಯಕ್ತಿಕ ಬದುಕು ಸಿನಿಮಾದ ಸೇಲೆಬ್ರೆಟಿಗಳಂತೆ ಅಯೋಮಯ. ಕಳೆದ 10ವರ್ಷಗಳಿಂದ ವಾಜಪೇಯಿ ಅವರ ಮರೆಗುಳಿತನ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಅವರು ಇಂದು ನಮ್ಮೊಂದಿಗಿಲ್ಲ. 15ದಿನಗಳ ಹಿಂದೆ ಗೃಹ ಸಚಿವರೊಂದಿಗೆ ಮಂಗಳೂರಿಗೆ ಹೋದಾಗ, ಉಡುಪಿ ಮೂಲದ ದೆಹಲಿಯಲ್ಲಿ ವಾಸಿಸುವ ಹಿರಿಯ ಮಿತ್ರ ರವಿ ಶೆಟ್ಟಿ ಅವರಿಗೆ ಜಾರ್ಜ್ ಫರ್ನಾಂಡಿಸ್ ಹೇಗಿದ್ದಾರೆ. ಸದ್ಯ ಅವರನ್ನು ನೋಡಿಕೊಳ್ಳುವವರು ಯಾರು? ಎಂದು ಪ್ರಶ್ನಿಸಿದ್ದೆ ಅವರು ನೀಡಿದ ವಿವರಗಳು ಕಳವಳಕಾರಿಯಾಗಿದ್ದವು.

ಭಾರತ ಒಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ. ಮಂಗಳೂರಿನಲ್ಲಿ ಹುಟ್ಟಿ ಮುಂಬೈನಲ್ಲಿ ಬೆಳೆದು, ಬಿಹಾರದಲ್ಲಿ ನೆಲೆಕಂಡು ದೆಹಲಿ ಯನ್ನಾಳಿದ ಸಮಾಜವಾದಿ ಸಂಗಾತಿ ಜಾರ್ಜ್ ನಿಮಗೆ ಸಾವಿಲ್ಲ.

“ಎಮ್ಮವರಿಗೆ ಸಾವಿಲ್ಲ ಎಮ್ಮವರು ಸಾವನರಿಯರು ಸಾವೆಂಬುದು ಸಯವಲ್ಲ. ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದಡೆಯಿಲ್ಲ”

 –  ಡಾ.ಮಹಾಂತೇಶ ಬಿರಾದಾರ