ಪ್ರೇಮ ಕವಿಗೊಂದು ಕಾವ್ಯ ಪ್ರಣಾಮ…!

ಪ್ರೇಮ ಕವಿಗೊಂದು ಕಾವ್ಯ ಪ್ರಣಾಮ…!

ಆ ಕವಿ ಬರೆಯಲು ಮುಂದಾದರೆ ಸಾಕು ‘ಮೈಸೂರ ಮಲ್ಲಿಗೆ’ ಅರಳಿ ಕಂಪು ಬೀರುತ್ತಿದ್ದವು. ಆ ಇಂಪಿನ ಕಂಪಿಗೆ ತಲೆದೂಗಿದ ‘ದೀಪದ ಮಲ್ಲಿ’ ಕಿಲ ಕಿಲನೆ ನಗುತ್ತ ‘ನವಿಲ ಧ್ವನಿಯಾಗುತ್ತಿದ್ದಳು’ ‘ಸಂಜೆ ಹಾಡು’ ಗುನುಗುತ್ತ ‘ಮೌನದಲ್ಲಿ ಮಾತು ಹುಡುಕುತ್ತ’, ‘ದೀಪ ಸಾಲಿನ ನಡುವೆ’ ನಡೆಯುತ್ತಿದ್ದರೆ ‘ಎದೆ ತುಂಬ ನಕ್ಷತ್ರ’ ತುಂಬಿಕೊಂಡು ‘ನವ ಪಲ್ಲವಿ’ ಸೃಷ್ಠಿಯಾಗುತ್ತಿತ್ತು. ‘ಕೈಮರದ ನೆರಳಲ್ಲಿ’ ‘ದುಂಡುಮಲ್ಲಿಗೆ’ಮುಡಿದು ‘ತೆರೆದ ಬಾಗಿಲಿನಲ್ಲಿ’ ‘ದಮಯಂತಿ’ ನಿಂತು ನಗುತ್ತಿದ್ದಳು. ನೊಡು ನೋಡುತ್ತಲೇ, ಕೇಳು ಕೇಳುತ್ತಲೇ ತನ್ಮಯತೆಯ ಸಾಗರದಲ್ಲಿ ಕೊಚ್ಚಿ ಹೋಗುತ್ತ ತನ್ನನ್ನು ತಾನು ಮರೆತು ಇನ್ನೆಲ್ಲಿಯೋ ತೇಲಿ ಬಿಡುತ್ತಿದ್ದಳು. ಹಾಗಿದ್ದವು ಆ ಹಾಡಿನ ಸಾಲುಗಳು.

ನಲವತ್ತರ ದಶಕದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಅರ್ಥ ನೀಡಿದ ಕವಿ ತನ್ನ ಕಲಾ ಕುಂಚದಲ್ಲಿ, ಭಾವನೆಗಳ ಬಣ್ಣವ ಬೆರಸಿ, ಭಾವಗೀತೆಯ ಚಿತ್ರ ಬಿಡಿಸಿದಾಗ ಇಡೀ ಕನ್ನಡ ಸಾರಸ್ವತ ಲೋಕವೇ ಮೆಚ್ಚಿ ಮೆರೆದಾಡಿತು. ಕವನಗಳೆಂದರೆ ಅರ್ಥೈಸಿಕೊಳ್ಳಲು ಬಲು ಕಠಿಣ ಎಂದುಕೊಂಡವರು ಸಹ ಇವರ ಭಾವಗೀತೆಗೆ ತಲೆ ಬಾಗಿ, ತನ್ಮಯತೆಯ ಹಾಡಿಗೆ ತಲೆದೂಗಿ, ಹಾಡಿನ ಮೋಡಿಗೆ ಮರುಳಾಗಿ, ಪದಗಳ ಲಾಲಿತ್ಯದಲ್ಲಿ ಕಳೆದು ಹೋಗಿ ತಮ್ಮನ್ನೆ ತಾವು ಮರೆಯುತ್ತಿದ್ದರು. ಪದಗಳಿಗೆ ಜೀವ ನೀಡುವುದು ಮಾತ್ರವಲ್ಲದೆ ಅವುಗಳಿಗೆ ಪ್ರೇಮದ ಸಂಸ್ಕಾರ ನೀಡಿ ಅರ್ಥಗಳಿಗೂ ಸಹ ವಿಶಿಷ್ಟ ಅರ್ಥ ಹುಟ್ಟಿ ಕೊಳ್ಳುವ ಹಾಗೆ ಮಾಡುವ ಮೋಡಿಗಾರನಾಗಿ ಆ ಕವಿ ಗುರುತಿಸಿಕೊಂಡು ಬಿಟ್ಟಿದ್ದರು. ಪ್ರಕಟಗೊಂಡ ಮೊದಲ ಕವನ ಸಂಕಲನದ ಮೂಲಕವೇ ಸಾರಸ್ವತ ಲೋಕದಲ್ಲಿ ಸಂಚಲನ ಮೂಡಿಸಿದ್ದರು. ಬರೆದ ಕವಿತೆಗಳ ಮೂಲಕ ಹೊಸ ಕನಸುಗಳನ್ನು ಕಟ್ಟಿಕೊಟ್ಟಿದ್ದರು. ಭಾವಗೀತೆಗಳ ಮೂಲಕ ಭವಿಷ್ಯವನು ಸ್ಪಷ್ಟಪಡಿಸಿದ್ದರು. ಒಟ್ಟಿನಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಪ್ಪಟ ಕಲಾ ಪ್ರತಿಭೆ ತಾನೆಂದು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿಬಿಟ್ಟಿದ್ದರು. ಆ ಶ್ರೇಷ್ಠ ಕವಿಯೇ ಕೆ.ಎಸ್.ನರಸಿಂಹಸ್ವಾಮಿ.

ಕನ್ನಡದ ಪ್ರೇಮ ಕವಿ ಎಂದೇ ಖ್ಯಾತಿ ಪಡೆದಿದ್ದ ಕೆ.ಎಸ್.ಎನ್ ಮೂಲತಃ ಮಂಡ್ಯ ಜಿಲ್ಲೆಯ ಕಿಕ್ಕೆರಿಯವರು. 1915ರ ಜನೇವರಿ 26 ರಂದು ಜನಿಸಿದ ಇವರಿಗೆ ಚಿಕ್ಕ ವಯಸ್ಸಿನಿಂದಲೂ ಹಾಡು-ಹಸೆ ಸಾಹಿತ್ಯ ಎಂದರೆ ಕೊಂಚ ಆಸಕ್ತಿ ಇತ್ತು. ವ್ಯಕ್ತಿ ಬೆಳೆಯುತ್ತ ವ್ಯಕ್ತಿತ್ವವೂ ಬೆಳೆಯುತ್ತದೆ, ವ್ಯಕ್ತಿತ್ವ ಬೆಳೆದಂತೆ ಆಲೋಚನಾ ಲಹರಿಯೂ ಬೆಳೆಯುತ್ತದೆ ಎನ್ನುವ ಮಾತಿಗೆ ಕೆ.ಎಸ್.ಎನ್ ಸಾಕ್ಷಿಯಾಗಿದ್ದಾರೆ. ಆಸಕ್ತಿಯಿಂದ ಹುಟ್ಟಿಕೊಂಡ ಪ್ರತಿಭೆ ಆಗಸಕ್ಕೇರುವ ಮೂಲಕ ಇಂದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದಿಗ್ಗಜನಾಗಿ ನಿಲ್ಲುವಂತೆ ಮಾಡಿದೆ. ಸುಮ್ಮನೆ ಅಕ್ಷರಗಳನ್ನು ಸೇರಿಸಿ, ವಾಖ್ಯ ರಚಿಸಿ ಕವಿತೆ ಹುಟ್ಟು ಹಾಕುವ ಗೋಜಲಿಗೆ ಹೋಗದ ಈ ಕವಿ ಮಹಾಶಯರು ಬರೆಯುವ ಪ್ರತಿಯೊಂದು ಸಾಲಿನಲ್ಲಿಯೂ ಕೂಡ ಪ್ರೀತಿಯನ್ನು ತುಂಬಿ ಪದಗಳಿಗೂ ಸಹ ಜೀವ ಮೂಡುವಂತೆ ಮಾಡಿದ್ದಾರೆ. ಇದರ ಪರಿಣಾಮ ವಾಗಿಯೇ ಅವರ ಹಾಡುಗಳೆಂದರೆ ಎಂತೆತವರು ತಲೆ ಬಾಗುತ್ತಾರೆ. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಕವಿತೆ ಕಟ್ಟುತ್ತಿದ್ದ ಕೆಎಸ್‍ಎನ್ ರವರು ಕೇಳುಗನನ್ನು ಹಿಡಿದಿಡುವ ಹಾಗೂ ಓದುಗನನ್ನು ತನ್ನತ್ತ ಬರಸೆಳೆವ ಮಾಂತ್ರಿಕ ಶಕ್ತಿಯನ್ನು ತಮ್ಮ ಬರವಣಿಗೆಯಲ್ಲಿ ಸಿದ್ದಿಸಿಕೊಂಡು ಬಿಟ್ಟಿದ್ದರು. ಇದರಿಂದಾಗಿಯೇ ಡಾ.ದ.ರಾ ಬೇಂದ್ರೆಯವರಿಗೆ ಶಬ್ದ ಗಾರುಡಿಗ ಎಂದು ಬಿಂಬಿಸಿದರೆ ಕೆ.ಎಸ್.ಎನ್ ಅವರನ್ನು ಪ್ರೇಮ ಗಾರುಡಿಗ ಎನ್ನುವುದು.

1942 ರಲ್ಲಿ ಮೊದಲ ಮುದ್ರಣ ಭಾಗ್ಯ ಕಂಡ ಇವರ ಮೊದಲ ಕವನ ಸಂಕಲನ ಇತಿಹಾಸವನ್ನೇ ಹುಟ್ಟು ಹಾಕಿದೆ. ‘ಮೈಸೂರು ಮಲ್ಲಿಗೆ’ಹೆಸರಿನಲ್ಲಿ ನಿರ್ಮಾಣವಾದ ಈ ಕವನ ಸಂಕಲನ ಇದುವರೆಗೂ ಸುಮಾರು 26ಕ್ಕೂ ಅಧಿಕ ಬಾರಿ ಮುದ್ರಣಗೊಳ್ಳುವುದರ ಮೂಲಕ ತನ್ನ ಜನಪ್ರೀಯತೆ ಎಷ್ಟಿದೆ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದೆ ಮಾತ್ರವಲ್ಲ ಆಧುನಿಕ ಯುವ ಕವಿಗಳಿಗೆ ಮಾರ್ಗಸೂಚಿ ಫಲಕವಾಗಿ ನಿಂತಿದೆ. ಮೈಸೂರು ಮಲ್ಲಿಗೆಯಿಂದ ಆರಂಭವಾದ ಕಾವ್ಯದ ಬಂಡಿಯು ಬರೀ ಪ್ರೇಮವನ್ನು ಹೊತ್ತುಕೊಂಡು ಬಂದರೆ ಅವರ ‘ಶಿಲಾಲತೆ’ಕವನ ಸಂಕಲನವು ನಿಷ್ಟೂರತೆ ಎಡೆಗೆ ಅವರನ್ನು ಹೊರಳುವಂತೆ ಮಾಡಿದೆ. ಯಾವುದೇ ಪೂರ್ವಾಗ್ರಹ ಪೀಡೆಯನ್ನು ಮೈಗಂಟಿಸಿಕೊಳ್ಳದ ಕವಿಯು ಸ್ವಚ್ಛಂದ ಬಾನಲ್ಲಿ ಹಾರಾಡುವ ಹಕ್ಕಿಯಂತೆ ಎನ್ನುವ ಮಾತು ಕೆ.ಎಸ್.ಎನ್ ಅವರಿಗೆ ಹೇಳಿ ಮಾಡಿಸಿದ ಹಾಗಿದೆ. ಆಧುನಿಕ ಕಾವ್ಯದಲ್ಲಿ ಇತ್ತೀಚೆಗೆ ಶುಭ್ರವಾದ ಪ್ರೇಮಕ್ಕಿಂತ ದೈಹಿಕ ವಾಂಚೆಯ ಕಮಟು ವಾಸನೆಯನ್ನೇ ಪ್ರೇಮವೆಂದು ನಂಬಿದವರಿಗೆ ಕೆ.ಎಸ್.ಎನ್ ರವರ ಕವಿತೆಯನ್ನೋಮ್ಮೆ ಕೇಳಿಸಿದರೆ ನಿಜವಾದ ಪ್ರೇಮದ ಅರ್ಥವಾಗುತ್ತದೆ. ಇವರ ಕವನಗಳು ಮನಸ್ಸುಗಳನ್ನು ಮುಟ್ಟುತ್ತವೆ, ಹೃದಯವನ್ನು ತಟ್ಟುತ್ತವೆ, ಕನಸುಗಳನ್ನು ಕಟ್ಟುತ್ತವೆ, ಅಳುವ ಕಡಲೊಳು ಬರುವ ನಗೆಯ ಹಾಯಿದೋಣಿಯಾಗುತ್ತವೆ, ನಸುನಗುತಲೆ ಪಿಸು ಮಾತನಾಡುವ ನಲ್ಲೆಯ ನೆನಪು ಮೂಡಿಸುತ್ತವೆ, ಭಾವನೆಗಳನ್ನು ಮೆಲ್ಲಗೆ ಅರಳಿಸುತ್ತವೆ, ಪ್ರೇಮದ ಕಂಪು ಎಲ್ಲೆಡೆ ಪಸರಿಸುತ್ತವೆ ಅಂಥ ಶಕ್ತಿ ಇವರ ಸಾಹಿತ್ಯ ಸಿರಿಗೆ, ಭಾವನಾ ಲಹರಿಗೆ ಹಾಗೂ ಶಬ್ದ ಸಂಪತ್ತಿಗಿದೆ.

ಅವರ ಬರವಣಿಗೆಯ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುವ ಶಬ್ದಗಳು ಒಂದೆಡೆ ಸೇರಿದಾಗ ಸೃಷ್ಠಿಯಾದ ಕವಿತೆಯ ಒಂದೊಂದು ಸಾಲುಗಳು ವರ್ಣಿಸಲಸದಳವಾದ ಮುತ್ತಿನ ಹಾರಗಳು. ಅದರಲ್ಲೂ ಅವರ ಮೊದಲ ಕವನ ಸಂಕಲನದ ಹೆಸರಿನಲ್ಲೇ ನಿರ್ಮಾಣವಾದ ಮೈಸೂರು ಮಲ್ಲಿಗೆ ಚಲನಚಿತ್ರವೂ ಸಹ ಅವರ ಹಾಡುಗಳಿಂದಲೇ ಅತ್ಯಂತ ಜನಪ್ರೀಯತೆ ಗಳಿಸಿಕೊಂಡಿತು. ಸ್ವಾತಂತ್ರ್ಯ ಚಳಿವಳಿಯ ಕಾಲದಲ್ಲಿನ ಪ್ರೇಮ ಕಥೆಗೆ ಕಾವ್ಯದ ಸ್ಪರ್ಷ ನೀಡಿದ್ದು ಚಿತ್ರದ ಯಶಸ್ಸಿಗೆ ಕಾರಣವಾಯಿತು. ಅದರಲ್ಲೂ ಸಿ.ಅಶ್ವಥ ಹಾಗೂ ಮೈಸೂರು ಅನಂಥಸ್ವಾಮಿ ಅವರ ಜೋಡಿ ಚಿತ್ರಕ್ಕೆ ಹೊಸ ರೂಪವನ್ನೇ ನೀಡಿಬಿಟ್ಟರು. ಆದರೆ ಎಲ್ಲಕ್ಕೂ ಕಾರಣವಾಗಿದ್ದೇ ಕೆಎಸೆನ್ ರವರ ಮಲ್ಲಿಗೆ ಹಾರದ ಘಮದಿಂದಲೇ. ಅಂದು ಸೃಷ್ಠಿಯಾದ ಆ ಹಾರದಲ್ಲಿ ಸೇರಿದ ಮುತ್ತುಗಳಲ್ಲಿ “ಒಂದಿರುಳು ಕನಸಿನಲಿ ನನ್ನವಳಾ ಕೇಳಿದೆನು ಚಂದ ನಿನಗಾವುದೆಂದು, ನಮ್ಮೂರು ಹೊನ್ನೂರು ನಿಮ್ಮೂರು ನವಿಲೂರು ಚಂದ ನಿನಗಾವುದೆಂದು, ನಮ್ಮೂರು ಚಂದವೋ ನಿಮ್ಮೂರು ಚಂದವೋ ಎಂದೆನ್ನ ಕೇಳಲಾಕೆ ಎನ್ನರಸ ಸುಮ್ಮನಿರಿ ಎಂದಳಾಕೆ” ಎನ್ನುವ ಕವಿತೆಯಲ್ಲಿ ಸತಿ ಪತಿಯರ ಸರಸದ ಜೊತೆಗೆ ಹಳ್ಳಿಗಾಡಿನ ಸೊಗಡನ್ನು ಕಟ್ಟಿಕೊಡುತ್ತಾರೆ. ಸುಮ್ಮನೆ ಹಾಡನ್ನೊಮ್ಮೆ ಗುನುಗಿದರೆ ಸಾಕು ಜಂಜಡದ ಬದುಕಿನಿಂದ ಕರೆತಂದು ಸುಂದರ ಹಳ್ಳಿ ಪರಿಸರದಲ್ಲಿ ನಿಲ್ಲಿಸುತ್ತದೆ. ಇನ್ನೂ “ಬಳೇಗಾರ ಚನ್ನಯ್ಯ ಬಾಗಿಲೆಗೆ ಬಂದಿಹೆನು ಒಳಗೆ ಬರಲಫ್ಪಣೆಯ ದೊರೆಯೇ, ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು ಬಳೆಯ ತೊಡಿಸುವುದಿಲ್ಲ ನಿಮಗೆ” ಎನ್ನುವ ಕವಿತೆಯಲ್ಲಿ ಬಳೆಗಾರನೊಬ್ಬ ಮುನಿಸಿನಿಂದ ಅಗಲಿದ ಸತಿ ಪತಿಯರ ನಡುವಿನ ರಾಯಭಾರಿಯಾಗಿ ಕಾರ್ಯ ಮಾಡುವುದು ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ. ತವರಿನ ಸುದ್ದಿಯನು ಬೇಸರದಲ್ಲಿರುವ ಪತಿಗೆ ಹಾಡಿನ ಮೂಲಕ ತಿಳಿಸುವ ಪರಿಯೂ ಕೆ.ಎಸ್‍ಎನ್ ಅವರ ಶಬ್ದ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುತ್ತದೆ. ಇನ್ನೂ “ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನಾ ಹೆಸರು, ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನಾ ಹೆಸರು, ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚಿಮ್ಮಿಸಿದ ಹಾಲಲ್ಲಿ ನಿನ್ನಾ ಹೆಸರು” ಎನ್ನುವ ಸಾಲುಗಳಂತೂ ಕಲ್ಪನೆಗೂ ಮೀರಿದ ಕರ್ಣಾನಂದವನ್ನು ನೀಡುತ್ತವೆ. ಅದರಲ್ಲೂ ತನ್ನ ಪ್ರೇಯಸಿಯನ್ನು ವರ್ಣಿಸುವ ಪರಿಯು ನಿಜಕ್ಕೂ ಕಲ್ಪನೆಗೂ ನಿಲುಕದೆ ಹೋಗುತ್ತದೆ. ಅಂತ ಅದ್ಭುತ ಪದಪುಂಜಗಳನ್ನು ಈ ಕವಿತೆ ಹೊಂದಿದೆ. ಹಾಗೇ ಇನ್ನೋಂದು ಕವಿತೆಯಲ್ಲಿ ಹೆಂಡತಿ ತವರಿಗೆ ಹೋಗಿ ಗಂಡನಿಗೆ ಬರೆದ ಪತ್ರದಲ್ಲಿ ತನ್ನ ಪ್ರೇಮ ನೀವೇದನೆಯನ್ನು ಮಾಡಿಕೊಳ್ಳುವ ಪರಿಯನ್ನೊಮ್ಮೆ ಕಂಡಾಗ ಅದ್ಭುತ, ಅಮೋಘ ಎನ್ನುವ ಮಾತು ನಮ್ಮಿಂದ ಬರಲೇ ಬೇಕು “ತವರ ಸುಖದೊಳು ಎನ್ನ ಮರೆತಿಹಳು ಎನ್ನದಿರಿ ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು, ನಿಮ್ಮ ನೆನಪೆ ನನ್ನ ಹಿಂಡುವುದು ಹಗಲಿನಲಿ ಇರುಳಿನಲಿ ಕಾಣುವುದು ನಿಮ್ಮ ಕನಸು” ಈ ಸಾಲುಗಳನ್ನು ಆಧುನಿಕ ಪ್ರೇಮಿಗಳಿಗೆ ಓದಿಸಿದರೆ ಭಹುಶಃ ಪ್ರೇಮಿಗಳಿಬ್ಬರ ಮನದಲ್ಲಿನ ತವಕ ತಲ್ಲಣಗಳಿಂದುಂಟಾಗುವ ವಿರಹ ಪ್ರವಾಹಗಳಿಗೆ ಶಬ್ದದಾಣೆ ಕಟ್ಟು ಕಟ್ಟಬಹುದೇನೋ ಎನ್ನಿಸುತ್ತದೆ.

“ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು” ಎನ್ನುವ ಹಾಡಿನಲ್ಲಂತೂ ಪ್ರತಿಯೊಬ್ಬರ ಬಾಳಲ್ಲಿ ಬಂದು ಹೋಗುವ ಸುಂದರ ಕ್ಷಣವನ್ನು, ಚಂದಿರನ ಬೆಳಕಲ್ಲಿ, ಇಂದಿರೆಯ ನೆನಪಲ್ಲಿ ಸುಂದರವಾಗಿ ಚಿತ್ರಿಸಿದ್ದು ಅವರ ಕಾವ್ಯ ಕೌಶಲ್ಯಕ್ಕೆ ಸೃಷ್ಠಿಯಾದ ಕಾವ್ಯಶಿಲ್ಪವಾಗಿದೆ. “ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ, ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ, ಹಿಂದು ಮುಂದು ನೋಡದೆ ಎದುರು ಮಾತನಾಡದೆ” ಎನ್ನುವ ಕವಿತೆಯ ಸಾಲಿನಲ್ಲಿ ಸತಿ ಪತಿಯರ ಮಾತಿರದ ಸಂಭಾಷೆಣೆಯನ್ನು, ಕಣ್ಣಲ್ಲಿ ಹುದುಗಿರುವ ಪ್ರೇಮವು ನಸುನೋಟದಿಂದ ಹೊರ ಬಂದು ಎದೆ ಸೇರುವ ಗಳಿಗೆಯನ್ನು ಸುಂದರವಾಗಿ ಚಿತ್ರಿಸಿ ಮನಕೆ ಖುಷಿಯ ಹಂದರ ಹಾಕುತ್ತಾರೆ. ಇನ್ನೂ ಅವರ ಕಾವ್ಯದ ಸಿರಿಗೆ ಹಿಡಿದ ಕೈಗನ್ನಡಿಯಂತಿರುವ ಮತ್ತೋಂದು ಜನಪ್ರೀಯ ಗೀತೆ ಎಂದರೆ “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ”ಎನ್ನುವ ಮೂಲಕ ಸತಿ ಪತಿಯರ ನಡುವಿನ ಹಿತವಿತ್ತ ಪ್ರೀತಿಯನು ಮಿತ ಸಾಲುಗಳಲ್ಲಿ ಅಪರಿಮಿತವಾಗಿ ತೋರಿಸುವ ಯತ್ನ ಮಾಡಿದ್ದಾರೆ.

ಆ ಹಾಡು ಕೇಳುಗನ ಮೊಗದಲ್ಲಿ ನಸು ನಗುವನ್ನು ಮೂಡಿಸಿದರೆ ಹಾಡುಗನ ಎದೆಯಲ್ಲಿ ಹೊಸರಾಗ ಅರಳಿಸುತ್ತದೆ. ಹೀಗೆ ಕೇವಲ ಇವರ ಹಾಡುಗಳು ಪ್ರೇಮ ಸಲ್ಲಾಪಕ್ಕೆ ಮಾತ್ರ ಸೀಮಿತವಾಗದೇ ಅದನ್ನು ದಾಟಿಯೂ ಮುಂದೆ ಸಾಗುತ್ತವೆ ಎನ್ನುವುದಕ್ಕೆ “ಆಕಾಶಕ್ಕೆದ್ದುನಿಂತ ಪರ್ವತ ಹಿಮ ಮೌನದಲ್ಲಿ, ಹಿಮಾಲಕೆ ಮುತ್ತನಿಡುವ ಬೆರ್ದೆರೆಗಳ ಗಾನದಲ್ಲಿ, ಬಯಲ ತುಂಬ ಹಸಿರ ರಾಶಿ ಉಕ್ಕಿ ಹರಿವ ನದಿಗಳಲ್ಲಿ, ನೀಲಿಯಲ್ಲಿ ಹೊಗೆಯ ಚಲ್ಲಿ ಯಂತ್ರಘೋಷ ಮೊಳಗುವಲ್ಲಿ, ಕಣ್ಣು ಬೇರೆ ನೋಟ ವೊಂದೆ ನಾವು ಭಾರತೀಯರು” ಈ ಸಾಲುಗಳು ಸಾಕ್ಷಿಯಾಗುತ್ತವೆ. ಅಷ್ಟೇ ಅಲ್ಲ ಪ್ರೇಮ ತುಂಬಿದ ಎದೆಯ ಅಮೃತವು ದೇಶಪ್ರೇಮವಾಗಿ ಜಿನುಗಿದ ಭಾವನೆ ಉಂಟಾಗುವಂತೆ ಮಾಡುತ್ತದೆ. ಹೀಗೆ ಕೆ.ಎಸ್.ನರಸಿಂಹಸ್ವಾಮಿಯವರ ಸಾಹಿತ್ಯ ಓದುಗನನ್ನು ಭಾವ ಪ್ರಪಂಚದೆಡೆಗೆ, ಕೇಳುಗನನ್ನು ಕಲ್ಪನಾ ಲೋಕದೆಡೆಗೆ, ಆಸ್ವಾದಿಸುವವನನ್ನು ಅನಂತದೆಡೆಗೆ, ಆರಾಧಿಸುವವನನ್ನು ಅಧಮ್ಯ ಚೈತನ್ಯದ ಕಡೆಗೆ, ಆದರಿಸುವವನ್ನು ಅನುಭವದ ಕಡೆಗೆ ಕರೆದೊಯ್ದು ಬಿಡುವ ಮಾಂತ್ರಿಕ ಶಕ್ತಿಯನ್ನು ಹೊಂದಿವೆ. ಅದಕ್ಕಾಗಿಯೇ ಅಂದಿಗೂ ಇಂದಿಗೂ ಕೇಳುಗನನ್ನು ಮಂತ್ರ ಮುಗ್ದಗೊಳಿಸುವಲ್ಲಿ ಯಶಸ್ವಿಯಾಗಿವೆ. ಹೀಗೆ ಕನ್ನಡ ಸಾರಸ್ವತ ಲೋಕಕ್ಕೆ ಸಾಗರದಷ್ಟು ಕವಿತೆಯನ್ನು ಕೊಟ್ಟು ಅದರಲ್ಲಿ ಬರಿ ಮುತ್ತುಗಳನ್ನೆ ಬಿಟ್ಟಿರುವ ಕವಿ ಕೆ.ಎಸ್.ಎನ್‍ರವರ ಜನ್ಮದಿನದಂದು ಅವರನ್ನು ಸ್ಮರಿಸುತ್ತ ಅವರು ಕೊಟ್ಟ ಹಾಡನ್ನು ಗುನುಗುನಿಸುತ್ತ ಆ ಪ್ರೇಮ ಕವಿಗೊಂದು ನಮನ ಸಲ್ಲಿಸೋಣ…

— ಮಂಜುನಾಥ ಮ ಜುನಗೊಂಡ 

ಉಪ್ಯಾಸಕರು : ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ದರಬಾರ ಪದವಿ ಮಹಾವಿದ್ಯಾಲಯ, ವಿಜಯಪುರ