ಸ್ವಾತಂತ್ರ್ಯ ಹೋರಾಟದಲ್ಲಿ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಗಳ ಪಾತ್ರ..!

ಸ್ವಾತಂತ್ರ್ಯ ಹೋರಾಟದಲ್ಲಿ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಗಳ ಪಾತ್ರ..!

ಸ್ವಾತಂತ್ರ ಹೋರಾಟದಲ್ಲಿ ತನ್ನ ಪಾಲ್ಗೊಂಡ ರಾಷ್ಟ್ರದ ಬೆರಳೆಣಿಕೆ ಮಠಗಳಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಮಠವು ಒಂದು. ತಮ್ಮ ಮಠದ ಸಾವಿರಾರು ಭಕ್ತರನ್ನ ಸ್ವಾತಂತ್ರ ಹೋರಾಟದಲ್ಲಿ ಧುಮುಕಿಸಿದ ಹೆಗ್ಗಳಿಕೆ ಇದೇ ಮಠದ ಅಂದಿನ ಮಠಾಧೀಶರಾಗಿದ್ದ ಮಾಧವಾನಂದ ಪ್ರಭುಜಿಗಳಿಗೆ ಸಲ್ಲುತ್ತದೆ.

1935ರ ವೇಳೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಾಧವಾನಂದ ಪ್ರಭುಜಿಗಳು ತಮ್ಮೊಂದಿಗೆ  20ಸಾವಿರಕ್ಕೂ ಅಧಿಕ ಭಕ್ತರನ್ನ ಹೋರಾಟದಲ್ಲಿ ದುಮುಕಿಸಿದ್ದರು. 1929 ರ ಪ್ರಾಯದಲ್ಲೆ ಮಹಾದೇವರು ಹೇಗಾದರು ಮಾಡಿ ಬ್ರಿಟಿಷರ ಹುಟ್ಟಡಗಿಸಲು ನಿರ್ಧರಿಸಿ ತಮ್ಮ ಅನುಯಾಯಿಗಳೊಂದಿಗೆ ಸೇರಿ ಹುಲಕೋಟೆ, ಸಾವಳಗಿ, ಇಂಚಗೇರಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನ ಅಪಹರಿಸಿದ್ದರು. ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ದರು. ಬ್ರಿಟಿಷರ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನ ಕಿತ್ತಹಾಕಿ ಠಾಣೆಗಳನ್ನ ಧ್ವಂಸಗೊಳಿಸಿದ್ದರು.

ಇನ್ನು ಬ್ರಿಟಿಷರ ಸರ್ಕಾರಕ್ಕೆ ಸೇರಬೇಕಿದ್ದ ಬೊಕ್ಕಸವನ್ನ ದೋಚಿದ್ದು ಆ ಸಮಯದಲ್ಲಿ ಬಾರಿ ಸಾಹಸ ಪ್ರಕರಣವಾಗಿತ್ತು. ಇದರ ಫಲವಾಗಿ  27 ಬಾರಿ ಜೈಲು ವಾಸ ಅನುಭವಿಸಿದ್ದಾರೆ. ಇವತ್ತಿಗು ಈ ಮಠದ ಸಾವಿರಾರು ಅನುಯಾಯಿಗಳು ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿ ಪಡೆದುಕೊಳ್ತಿದ್ದಾರೆ ಎನ್ನೊದೆ ಸೋಜಿಗ.  ಸ್ವಾತಂತ್ರ ನಂತರ ಮಠಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿಯವರ ಮೊಮ್ಮಗ ಅರುಣ ಗಾಂಧಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಮಾಧವಾನಂದರ ಕೊಡುಗೆ ಹಾಗೂ ಮಠದ ಪಾತ್ರದ ಬಗ್ಗೆ ವಿದೇಶಗಳಲ್ಲಿ ಅತ್ಯಧಿಕ ಪ್ರಸಾರ ಉಳ್ಳ ದಿ ಇಂಪ್ರಿಂಟ್ ಇಂಗ್ಲಿಷ ಪತ್ರಿಕೆಯಲ್ಲಿ ಬರೆದಿದ್ದರು. ಇದನ್ನ ಓದಿನ ಅದೇಷ್ಟೋ ವಿದೇಶಿಗರು ಕೂಡ ಸಧ್ಯ ಮಠದ ಭಕ್ತರಾಗಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಜನಿಸಿದ ಮಾಧವಾನಂದರು ತಮ್ಮ 22 ನೇ ವಯಸ್ಸಿನಲ್ಲೆ ಸ್ವಾತಂತ್ರ ಹೋರಾಟಲ್ಲಿ ಪಾಲ್ಗೊಂಡರು. ಚಲೇ ಜಾವ್ ಚಳುವಳಿ, ಉಪ್ಪಿನ ಸತ್ಯಾಗ್ರಹ, ಗೋವಾ ವಿಮೋಚನೆ ಸೇರಿದಂತೆ ಅನೇಕ ಹೋರಾಟಗಳಲ್ಲಿ ಮಾಧವಾನಂದ ಪ್ರಭುಜಿಗಳ ತಮ್ಮ ಮಠದ ಭಕ್ತರೊಂದಿಗೆ ಪಾಲ್ಗೊಂಡಿದ್ದರು. ಮಹಾತ್ಮಾ ಗಾಂಧೀಜಿ, ಸುಬಾಷ ಚಂದ್ರ ಬೋಸ್ ರೊಂದಗೆ ನಿಕಟ ಸಂಪರ್ಕ ಹೊಂದಿದ್ದರು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಳಿ ಇರುವ ಗಿರೀಶ ಆಶ್ರಮದಲ್ಲಿ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಮಾಧವಾನಂದ ಪ್ರಭುಜಿಗಳು ನಡೆಸಿದ ಗುಪ್ತ ಸಭೆಯಲ್ಲಿ ಸುಬಾಷಚಂದ್ರ ಬೋಸ್ ಪಾಲ್ಗೊಂಡಿದ್ದರು ಅನ್ನೋದು ಗಮನಾರ್ಹ.

1938 ರಲ್ಲಿ ಸ್ವಾತಂತ್ರ ಹೋರಾಟ ಉಗ್ರ ಸ್ವರೂಪ ಪಡೆದಾಗ ಮಾಧವಾನಂದರು ತಮ್ಮ ಮಠದ ಭಕ್ತರೊಂದಿಗೆ ಜೈಲು ವಾಸ ಅನುಭವಿಸಿದ್ದರು. ಆ ಸಂದರ್ಭದಲ್ಲಿ ಮಾಧವಾನಂದರ ಉಗ್ರ ಸ್ವರೂಪದ ಹೋರಾಟ ಕಂಡ ಬ್ರಿಟಿಷ್ ಸರ್ಕಾರ ಅವರ  ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿತ್ತು. ಅದರಂತೆ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಭಕ್ತರನ್ನ ಒಟ್ಟು ಗೂಡಿಸಲು ಮಾಧವಾನಂದರು ತಮ್ಮ ವಾಹನದಲ್ಲಿ ಹೊರಟಿದ್ದಾಗ ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿಯಲ್ಲಿ ಬ್ರಿಟಿಷ್ ಪೊಲೀಸರು ಇವರ ಮೇಲೆ ಗುಂಡು ಹಾರಿಸಿದರು. ಹಲವು ಸುತ್ತು ಗುಂಡು ಹಾರಿಸಿದ ಪೊಲೀಸರು ಬಂದು ನೋಡಿದಾಗ ಅಲ್ಲಿ ಮಾಧವಾನಂದರು ಇರಲೆ ಇಲ್ಲ. ಅವರು ಅಂದುಕೊಂಡಂತೆ ಗೋಕಾಕ ಬಳಿಯ ಹಳ್ಳಿಯೊಂದರಲ್ಲಿ ಸ್ವಾತಂತ್ರ್ಯ ಹೋರಾಟದ ಉದ್ದೇಶಕ್ಕಾಗಿ ನಡೆದ ಗುಪ್ತ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನ ಮಾಧವಾನಂದ ಪ್ರಬುಜಿಗಳ ಪವಾಡ ಎನ್ನಲಾಗಿದೆ. ಈ ಚಮತ್ಕಾರವನ್ನ ಕಂಡಿದ್ದ ಬ್ರಿಟಿಷ್ ಪೊಲೀಸರು ಮತ್ಯಾವತ್ತು ಮಾಧವಾನಂದರ ಮೇಲೆ ಗುಂಡು ಹಾರಿಸುವ ಪ್ರಯ್ನಕ್ಕೆ ಹೋಗಲಿಲ್ಲವಂತೆ.  ಹೀಗಾಗಿ ಮಾಧವಾನಂದರ ಅನುಯಾಯಿಗಳು ಅವರನ್ನ ದೇವರು ಅಂತಲೇ ಸಂಬೋದಿಸುತ್ತಿದ್ದರು. ಈಗಲು ಮಠದಲ್ಲಿ ಅದು ಜಾರಿಯಲ್ಲಿದೆ.

ಕೇವಲ ಭಾರತ ಸ್ವಾತಂತ್ರ್ಯ ಅಷ್ಟೇ ಅಲ್ಲದೆ ಮಾಧವಾನಂದರು ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸಿ ಮೈಸೂರು ಕರ್ನಾಟಕವಾಗಬೇಕೆಂದು ಉಪವಾಸ ಸತ್ಯಾಗ್ರಹ ಮಾಡಿದ್ದರು. ಹೀಗಾಗಿ ಕರ್ನಾಟಕ ಸರ್ಕಾರ ಸುವರ್ಣ ಕರ್ನಾಟಕ ಸಂಭ್ರಮದ ಸಂದರ್ಭದಲ್ಲಿ ಮಾಧವಾನಂದ ಪ್ರಬುಜಿಗಳಿಗೆ ಮರಣೋತ್ತರವಾಗಿ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ನು ಸ್ವಾತಂತ್ರ್ಯ ನಂತರ ಉಂಟಾದ ರೈತರು ಹಾಗೂ ಭೂ ಹಿಡುವಳಿದಾರರ ನಡುವಿನ ಸಂಘರ್ಷ, ರಜಾಕರ ಹಾವಳಿ ಹತ್ತಿಕ್ಕುವಲ್ಲು ಶ್ರೀಗಳ ಕೊಡುಗೆ ಅಪಾರವಾಗಿದೆ. ಭಾರತಕ್ಕೆ ಸ್ವಾತಂತ್ರ ಸಿಕ್ಕ ನಂತರವು ಗೋವಾ ಹಾಗೂ ದೀವ್, ದಮನ್ ದ್ವೀಪಗಳು ಪೋರ್ಚುಗೀಜರ ಹಿಡಿತದಲ್ಲಿದ್ದು. ಇದನ್ನ ವಿರೋಧಿಸಿದ್ದ ಮಾಧವಾನಂದರು ಗೋವಾ ರಾಜ್ಯಧಾನಿ ಪಣಜಿಯಲ್ಲಿ ಭಾರತ ದೇಶ ಧ್ವಜ ಹಾರಾಡಿಸಿ ಪೋರ್ಚುಗಿಸರ ವಿರುದ್ಧ ಹೋರಾಟ ಮಾಡಿದ್ದರು.ಈ ಮೂಲಕ ಗೋವಾ ವಿಮೋಚನೆ ಮಾಡುವ ಮೂಲಕ ಗೋವಾ ರಾಜ್ಯವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡುವಲ್ಲಿ ಮಾಧವಾನಂದರ ಪಾತ್ರ ಹಿರಿದಾಗಿದೆ.

ಭಾರತ ಸ್ವಾತಂತ್ರ ಹೋರಾಟದಲ್ಲಿ ಉಗ್ರ ಸ್ವರೂಪದ ಹೋರಾಟದಿಂದಲೆ ಬ್ರೀಟಿಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಮಾಧವಾನಂದ ಪ್ರಬುಜಿಗಳು ಸಮಾಜದಲ್ಲಿಯ ಜಾತೀಯತೆ ಹೋಗಲಾಡಿಸಲು 20 ಸಾವಿರಕ್ಕೂ ಅಧಿಕ ಅಂತರ್ ಜಾತಿ, ಅಂತರ್ ಧರ್ಮಗಳ ಮದುವೆ ಮಾಡಿದ್ದಾರೆ. ಸ್ವತಃ ತಮ್ಮ ಮೊಮ್ಮಗಳನ್ನ ಮುಸ್ಲಿಂ ಸಮೂದಾಯದ ಯುವಕನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಈ ಮೂಲಕ ಸಮಾಜದಲ್ಲಿನ ಮೇಲು-ಕೀಳು, ಜಾತೀಯತೆ ಹೋಗಲಾಡಿಸಿ ಇಂಚಗೇರಿ ಮಠವನ್ನ ಜಾತ್ಯಾತೀತ ಮಠವನ್ನಾಗಿ ರೂಪಿಸಿದ ಕೀರ್ತಿ ಮಾಧವಾನಂದ ಪ್ರಭುಜಿಗಳಿಗೆ ಸಲ್ಲುತ್ತದೆ.