ಹಿಂದೂ-ಮುಸ್ಲಿಂ ರಾಜರ ಆರಾದ್ಯ ದೈವವನ್ನು ಗುಹೆಯಲ್ಲಿ ಸ್ಥಾಪನೆ ಮಾಡಿದ್ಯಾಕೆ? ತೊರವಿ ಗ್ರಾಮಕ್ಕೆ ಆ ಹೆಸರು ಬಂದಿದ್ದು ಹೇಗೆ.? ಐತಿಹಾಸಿಕ ಮಾಹಿತಿ

ಹಿಂದೂ-ಮುಸ್ಲಿಂ ರಾಜರ ಆರಾದ್ಯ ದೈವವನ್ನು ಗುಹೆಯಲ್ಲಿ ಸ್ಥಾಪನೆ ಮಾಡಿದ್ಯಾಕೆ? ತೊರವಿ ಗ್ರಾಮಕ್ಕೆ ಆ ಹೆಸರು ಬಂದಿದ್ದು ಹೇಗೆ.? ಐತಿಹಾಸಿಕ ಮಾಹಿತಿ

ವಿಜಯಪುರ ತಾಲೂಕಿನ ತೊರವಿ ಗ್ರಾಮದಲ್ಲಿರುವ ಶ್ರೀ ಲಕ್ಷ್ಮಿ ನರಂಸಿಹ ದೇವಸ್ಥಾನದಲ್ಲಿ ನೆಲೆಸಿದ್ದಾನೆ ಉಗ್ರ ನರಸಿಂಹ. ಕ್ರಿ.ಶ 8ನೇ ಶತಮಾನ ಅಂದರೆ ಸುಮಾರು 1200 ವರ್ಷಗಳ ಹಿಂದಿನಿಂದಲೂ ಇಲ್ಲಿ ದೇವಾಲಯವಿದೆ. 1200 ವರ್ಷಗಳ ಹಿಂದೆ ಈಗಿನ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಚಿಮ್ಮಲಗಿ ಗ್ರಾಮದಲ್ಲಿ ಜಮೀನೊಂದರಲ್ಲಿ ದೊರೆತ ಈ ಉಗ್ರ ನರಸಿಂಹನ ಮೂರ್ತಿ ಶಾಲಿಗ್ರಾಮ ಕಲ್ಲಿನಲ್ಲಿ ಉದ್ಭವವಾಗಿದ್ದು. ಅಂದಿನ ಕಾಲದಲ್ಲಿ ನೆಲ ಅಗೆದಾಗ ದೊರೆತ ಈ ಉಗ್ರ ನರಸಿಂಹನ ಮೂರ್ತಿಗೆ ಭೂಮಿಯ ಆಳದಲ್ಲೆ ದೂರ್ವಾಸ ಮುನಿಗಳು ಬಂದು ನೆಲದಲ್ಲಿಯೇ ಪೂಜೆ ಸಲ್ಲಿಸುತ್ತಿದ್ದರಂತೆ. ಬಳಿಕ ತೊರವಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಯಿತು.

ಭಕ್ತರ ಕಷ್ಟಗಳನ್ನು ತ್ವರಿತ ಗತಿಯಲ್ಲಿ ಪರಿಹರಿಸುತ್ತಿದ್ದ ಈ ನರಸಿಂಹ ದೇವರು ನೆಲಸಿದ ಜಾಗವನ್ನು ತ್ವರಿತಾಲಯ ಎಂದು ಕರೆಯಲಾಗುತ್ತಿತ್ತು. ಅಂದಿನ ತ್ವರಿತಾಲಯವೆ ಇಂದಿನ ತೊರವಿ ಆಗಿದೆ. ತೊರವಿ ಗ್ರಾಮದಲ್ಲಿ ನೆಲೆಸಿರುವ ಉಗ್ರ ನರಸಿಂಹ ದೇವಸ್ಥಾನ ಭೂಮಿಯ ಒಳಭಾಗದಲ್ಲಿ (ಗುಹೆಯಲ್ಲಿದೆ). ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳು. ಮೊದಲನೇಯದಾಗಿ ಸಿಂಹ ಯಾವಾಗಲು ಗುಹೆಯಲ್ಲೆ ವಾಸಿಸುತ್ತದೆ ಹಾಗಾಗಿ ನರಸಿಂಹನನ್ನು ಗುಹೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಎರಡನೇಯದಾಗಿ ಯುದ್ದದ ಸಮಯದಲ್ಲಿ ದೇವಸ್ಥಾನದ ಮೇಲೆ ದಾಳಿ ನಡೆಯದಂತೆ ತಡೆಯಲು ದೇವರನ್ನು ಗುಹೆಯಲ್ಲಿ ಸ್ಥಾಪಿಸಿದರೆ ಯಾರಿಗೂ ಸುಲಭವಾಗಿ ಗೋಚರವಾಗು ದಿಲ್ಲವೆಂದು ಹೀಗೆ ಮಾಡಲಾಗಿದೆ.

ಶಾಲಿಗ್ರಾಮ ಕಲ್ಲಿನಲ್ಲಿ ಉದ್ಭವವಾಗಿ ಗರ್ಭಗುಡಿಯಲ್ಲಿರುವ ಲಕ್ಷ್ಮೀನರಸಿಂಹ ದೇವರ ವಿಗ್ರಹ ಮೂರು ಅಡಿ ಎತ್ತರ, ಎರಡು ಅಡಿ ಅಗಲವಾಗಿದೆ. ನರಸಿಂಹ ದೇವರು ಎಡಗಾಲು ಮಡಚಿ ಬಲಗಾಲನ್ನು ಕೆಳಗೆ ಬಿಟ್ಟು ಗರುಡನ ಮೇಲೆ ಕುಳಿತಿದ್ದು, ತೊಡೆಯ ಮೇಲೆ ಹಿರಣ್ಯ ಕಶಿಪುವನ್ನು ಮಲಗಿಸಿ ಅವನ ಹೊಟ್ಟೆ ಸೀಳಿ ಎರಡೂ ಕೈಗಳಿಂದ ಮೇಲೆಕ್ಕೆ ಎಳೆದಿರುತ್ತಾನೆ. ಉಳಿದ ಆರು ಕೈಗಳಲ್ಲಿ ಶಂಖಚಕ್ರಾದಿ ಆಯೂಧಗಳಿದ್ದು ಅಷ್ಟ ಭುಜಗಳನ್ನು ಹೊಂದಿದ್ದಾನೆ. ದೇವಸ್ಥಾನದ ಗರ್ಭಗುಡಿ ಪ್ರವೇಶಿಸುತ್ತಿದ್ದಂತೆ ಮೊದಲನೇಯದಾಗಿ ಎದುರಿಗೆ ಕಾಣುವುದು ಲಿಂಗ. ಇದು ದೂರ್ವಾಸಮುನಿಗಳ ಪ್ರತೀಕವಾಗಿ ಪ್ರತಿಷ್ಟಾಪಿಸಲ್ಪಟ್ಟಿದೆ. ನರಸಿಂಹ ಮೂರ್ತಿ ಭೂಮಿಯ ಆಳದಲ್ಲಿದ್ದಾಗ ನಿತ್ಯ ದೂರ್ವಾಸಮುನಿಗಳು ನರಸಿಂಹನಿಗೆ ಪೂಜೆ ಸಲ್ಲಿಸುತ್ತಿದ್ದುದರಿಂದ ಮೊದಲಿಗೆ ದೂರ್ವಾಸಮುನಿಗಳ ಪ್ರತೀಕವಾಗಿ ಲಿಂಗವನ್ನು ಪ್ರತಿಷ್ಟಾಪಿಸಲಾಗಿದೆ. ಇನ್ನು ಲಿಂಗದ ಬಲಗಡೆ ಉಗ್ರ ನರಸಿಂಹ ದೇವರ ಮೂರ್ತಿ ಕಾಣುತ್ತದೆ. ಬಲಗಡೆ ಶ್ರೀ ಲಕ್ಷ್ಮೀ ವಿಗ್ರಹ ಎಡಗಡೆ ಪ್ರಲ್ಹಾದರ ವಿಗ್ರಹವಿದ್ದು ಮೇಲ್ಭಾಗದಲ್ಲಿ ದಶಾವತಾರಗಳನ್ನು ಹೊಂದಿದ್ದಾನೆ.

ನರಸಿಂಹನ ದರ್ಶನಕ್ಕೆ 16ನೇ ಶತಮಾನದಲ್ಲಿದ್ದ ನಿಜಾಮರ ಅರಸ ಮಹಮ್ಮದ ಆದಿಲ್ ಶಾಹಿ ಕೂಡ ನಡೆದುಕೊಳ್ಳುತ್ತಿದ್ದ. ಇದರ ಫಲವಾಗಿ ದೇವಸ್ಥಾನದ ಗರ್ಭಗುಡಿಯ ಬಳಿ ಒಂದು ಸಣ್ಣದಾದ ಕಿಂಡಿ ಕಾಣಸಿಗುತ್ತದೆ. ಆ ರಹಸ್ಯ ಮಾರ್ಗ ಇಬ್ರಾಹಿಂ ರೋಜಾ ಹಾಗೂ ಗೋಳಗುಮ್ಮಟದಿಂದ ಸುರಂಗ ಮಾರ್ಗದಲ್ಲಿ ಇಲ್ಲಿಗೆ ಬರುತ್ತದೆ ಎನ್ನುವ ಪ್ರತೀತಿ ಇದೆ. ಈ ಸುರಂಗ ಮಾರ್ಗದ ಮೂಲಕ ಆದಿಲ್ ಶಾಹಿ ಅರಸರು ದೇವಸ್ಥಾನಕ್ಕೆ ಬರುತ್ತಿದ್ದರು. ರಾಜ ಸುರಂಗ ಮಾರ್ಗದಲ್ಲಿ ಎಲ್ಲಿಗೆ ಹೋಗುತ್ತಾನೆ ಎಂಬ ಸಂಶಯ ಕಾಡದಿರಲೆಂದು ತೊರವಿ ಹೊರವಲಯದಲ್ಲಿ ಸಂಗೀತ ಮಹಲ್ ಕಟ್ಟಸಿದ್ದ. ಇಲ್ಲಿಗೆ ಸಂಗೀತ ಕೇಳಲು ಹೋಗುತ್ತೇನೆ ಎಂದು ಹೇಳಿ ನರಸಿಂಹ ದೇವರ ದರ್ಶನಕ್ಕೆ ಬರುತ್ತಿದ್ದ ಎಂಬ ಪ್ರತೀತಿ ಇದೆ.

ತ್ವರಿತಾಲಯ ಎಂಬ ಹೆಸರು ಬರುವುದಕ್ಕೆ ಮುಖ್ಯ ಕಾರಣ ಎಂದರೆ ಭಕ್ತರು ಇಲ್ಲಿಗೆ ಬಂದು ತಮ್ಮ ಸಂಕಷ್ಟ ತೋಡಿಕೊಂಡರೆ ತ್ವರಿತವಾಗಿ ಸಮಸ್ಸೆ ಬಗೆಹರಿಸುತ್ತಾನೆ. ಮದುವೆಯಾಗದವರಿಗೆ, ಮಕ್ಕಳಾಗದವರಿಗೆ ಮದುವೆ, ಮಕ್ಕಳ ಭಾಗ್ಯವನ್ನು ಕರುಣಿಸುವ ನರಸಿಂಹನ ದರ್ಶನ ಪಡೆಯಲು ಪ್ರತಿ ಶನಿವಾರ ಸಾವಿರಾರು ಭಕ್ತರು ಬರಿಗಾಲಲ್ಲಿ ನಡೆದುಕೊಂಡು ದೇವಸ್ಥಾನಕ್ಕೆ ಬರುತ್ತಾರೆ.